ದೇವರಗುಂಡ ವೆಂಕಪ್ಪ ಸದಾನಂದ ಗೌಡ (ಜನನ. ೧೮, ಮಾರ್ಚ್ ೧೯೫೩) ಮಾಜಿ ಕೇಂದ್ರ ಸಚಿವ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ. ಪ್ರಸಕ್ತ ಅವರು ೧೭ನೇ ಲೋಕಸಭೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಸಂಸದರು.
ಸದಾನಂದ ಗೌಡರು, ಕೊಡಗು ದೇವರಗುಂಡ ಗೌಡ ಪರಿವಾರದ ಮಂಡೆಕೊಲು ಗ್ರಾಮ ಸುಳ್ಯ ತಾಲ್ಲೂಕಿನ ವೆಂಕಪ್ಪಗೌಡ ಮತ್ತು ಕಮಲಾ ದಂಪತಿಗಳ ಪುತ್ರನಾಗಿ ಜನಿಸಿದರು. ಅವರ ಪ್ರಾರಂಭಿಕ ವಿದ್ಯಾಭ್ಯಾಸ, ಪುತ್ತೂರು ತಾಲ್ಲೂಕಿನ ಕೆಯ್ಯೂರ್,ಹಾಗೂ ಸುಳ್ಯದಲ್ಲಿ ನಡೆಯಿತು. ಫಿಲೋಮಿನಾ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಪದವಿಗಳಿಸಿ ನಂತರ, ವೈಕುಂಠ ಬಾಳಿಗ ಲಾ ಕಾಲೇಜಿನಲ್ಲಿ ಕಾನೂನು ಪದವಿ ಗಳಿಸಲು ಹೊರಟರು. ಮುಂದೆ, ಅವರು, ಲಾ ಕಾಲೇಜಿನ ವಿದ್ಯಾರ್ಥಿ ಸಂಘದ ಮುಖ್ಯ ಕಾರ್ಯದರ್ಶಿಯ ಸ್ಥಾನಕ್ಕೆ ಚುನಾಯಿತರಾದರು. ಜಿಲ್ಲಾ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಮುಖ್ಯ ಕಾರ್ಯದರ್ಶಿಯಾಗಿ ಬಹಳ ಪ್ರಖ್ಯಾತರಾಗಿದ್ದರು. ೧೯೭೬ರಲ್ಲಿ, ಅವರು ಸುಳ್ಯ ಮತ್ತು ಪುತ್ತೂರಿನಲ್ಲಿ, ವಕೀಲಿ ವೃತ್ತಿಯನ್ನು ಆರಂಭಿಸಿದರು. ಸದಾನಂದರು, ಉತ್ತರ ಕನ್ನಡ ಜಿಲ್ಲೆಯಸಿರ್ಸಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸ್ವಲ್ಪಕಾಲ ಸೇವೆ ಸಲ್ಲಿಸಿದರು. ೧೯೮೧ರಲ್ಲಿ ಡಾಟಿ ಸದಾನಂದ ಅವರನ್ನು ಮದುವೆಯಾದರು. ಈ ದಂಪತಿಗಳ ಮಗ ಕಾರ್ತಿಕ್ ಗೌಡ, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಿಂದ ಪದವಿ ಗಳಿಸಿದ್ದಾರೆ. ಸದಾನಂದ ಗೌಡರ ಮೊದಲನೆಯ ಮಗ, ಕೌಶಿಕ್ ಗೌಡ ಮೆಡಿಕಲ್ ವಿದ್ಯಾರ್ಥಿಯಾಗಿದ್ದರು. ೨೦೦೩ ರಲ್ಲಿ ಪುತ್ತೂರಿನ ಬಳಿ ಒಂದು ರಸ್ತೆ ಅಪಘಾತದಲ್ಲಿ ಮೃತರಾದರು.[೧]
ಸದಾನಂದ ಗೌಡ ಅವರು ಅಂದಿನ ಜನ ಸಂಘದ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದರು. ನಂತರ ಸುಳ್ಯ ವಿಧಾನಸಭಾ ಕ್ಷೇತ್ರದ ಪಕ್ಷಾಧ್ಯಕ್ಷ, ದಕ್ಷಿಣ ಕನ್ನಡ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ, ದಕ್ಷಿಣ ಕನ್ನಡ ಬಿಜೆಪಿ ಉಪಾಧ್ಯಕ್ಷ, ರಾಜ್ಯ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿ (೧೯೮೩-೮೮), ರಾಜ್ಯ ಬಿಜೆಪಿ ಪಕ್ಷದ ಕಾರ್ಯದರ್ಶಿ (೨೦೦೩-೦೪) ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ (೨೦೦೪) ಆಗಿ ಕಾರ್ಯ ನಿರ್ವಹಿಸಿದ್ದಾರೆ. ೧೯೯೪ ಮತ್ತು ೧೯೯೯ರಲ್ಲಿ ದಕ್ಷಿಣ ಕನ್ನಡದ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು. ತಮ್ಮ ಎರಡನೇ ಅವಧಿಯಲ್ಲಿ ರಾಜ್ಯ ವಿರೋಧ ಪಕ್ಷದ ಉಪನಾಯಕರಾದರು. ೨೦೦೪ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ವೀರಪ್ಪ ಮೊಯ್ಲಿ ಅವರನ್ನು ೩೨,೩೧೪ ಮತಗಳಿಂದ ಸೋಲಿಸಿ ೧೪ನೇ ಲೋಕಸಭೆಗೆ ಆಯ್ಕೆಯಾದರು[೨]. ೨೦೦೯ರಲ್ಲಿ ಪಕ್ಷವು ಅವರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ವರ್ಗಾಯಿಸಿತು[೩] ೨೦೧೪-೧೯ರಲ್ಲಿ ರೈಲ್ವೇ, ಕಾನೂನು, ಅಂಕಿ-ಅಂಶ ಖಾತೆ, ೨೦೧೯-೨೧ರಲ್ಲಿ ರಸಗೊಬ್ಬರ ಖಾತೆಯ ಸಚಿವರಾಗಿದ್ದರು.
'ಜನಸಂಘದ ಸಕ್ರಿಯ ರಾಜಕಾರಣ'ದಲ್ಲಿ ಭಾಗಿಯಾಗಿದ್ದರು. ಭಾರತೀಯ ಮಜ್ದೂರ್ ಸಂಘ (ಬಿ.ಎಂ.ಎಸ್) ನಲ್ಲೂ ಕಾರ್ಯ ನಿರ್ವಹಿಸಿದ್ದ ಸದಾನಂದ ಗೌಡರು, 'ಸುಳ್ಯ ತಾಲ್ಲೂಕು ಆಟೋ ರಿಕ್ಷಾ ಚಾಲಕರ ಹಾಗೂ ಮಾಲಿಕರ ಸಂಘ'ದಲ್ಲಿಯೂ ಸೇವೆ ಸಲ್ಲಿಸಿದ್ದರು.
ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಅವರು ಖೋಖೋ ಆಟದಲ್ಲಿ ಅತ್ಯಂತ ಆಸಕ್ತಿತೋರಿಸಿ 'ಮೈಸೂರು ವಿಶ್ವವಿದ್ಯಾಲವನ್ನು ಪ್ರತಿನಿಧಿಸಿ'ದ್ದರು. 'ಬ್ಯಾಡ್ ಮಿಂಟನ್' ಮತ್ತು 'ಟೆನ್ನಿಸ್' ಆಟಗಳನ್ನೂ ಆಡುತ್ತಿದ್ದರು. 'ಕರಾವಳಿಯ ಬಹು ಜನಪ್ರಿಯ-ಜಾನಪದ ಕಲೆ'ಯಾದ ಯಕ್ಷಗಾನದ ಬಗ್ಗೆ ಅತ್ಯಂತ ಗೌರವವಿದೆ. ಸಮಯ ದೊರೆತಾಗ ಆಟಗಳನ್ನು ವೀಕ್ಷಿಸುತ್ತಾರೆ.
ಬಿ.ಜೆ.ಪಿ.ಪಕ್ಷದ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ೩೧ರ ಜುಲೈ ೨೦೧೧ ರಂದು ರಾಜೀನಾಮೆ ಇತ್ತರು. ೩ ಆಗಸ್ಟ್ ೨೦೧೧ ರಂದು , ಬಿಜೆಪಿ ಶಾಸಕರ ಗೌಪ್ಯ ಮತದಾನದಲ್ಲಿ ಬಹುಮತ ಪಡೆದ ಡಿ.ವಿ.ಸದಾನಂದ ಗೌಡರು ಜಗದೀಶ್ ಶೆಟ್ಟರ್ ಗಿಂತ ಹೆಚ್ಚು ಮತ ಗಳಿಸಿ ರಾಜ್ಯದ ೨೬ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.